
Thu Nov 07 17:25:23 UTC 2024: ## ಮೂರು ವರ್ಷದ ಬಾಲಕ ಸಮರ್ಥ ನಿರಾಣಿ ಗಾಲ್ಫ್ ಕಾರ್ಟ್ ಓಡಿಸಿ ಇಂಡಿಯಾ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಬರೆದರು
ಬಾಗಲಕೋಟೆ: ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಮೊಮ್ಮಗ ಸಮರ್ಥ ವಿಜಯ್ ನಿರಾಣಿ (3 ವರ್ಷ 1 ತಿಂಗಳು) ಅವರು ಗಾಲ್ಫ್ ಕಾರ್ಟ್ ಓಡಿಸಿ ಇಂಡಿಯಾ ಮತ್ತು ಏಷ್ಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಬರೆದಿದ್ದಾರೆ.
ಚಿಕ್ಕಂದಿನಿಂದಲೂ ಎಲೆಕ್ಟ್ರಿಕ್ ಕಾರುಗಳನ್ನು ಓಡಿಸುತ್ತಿದ್ದ ಸಮರ್ಥ ಒಮ್ಮೆ ಕಾರ್ಖಾನೆ ವೀಕ್ಷಣೆ ಮಾಡುವುದಕ್ಕೆ ಗಾಲ್ಫ್ ಕಾರ್ಟ್ ಓಡಿಸಬೇಕೆಂದು ಹಠ ಮಾಡಿದರು. ಅವರ ಹಠಕ್ಕೆ ಮನೆಯವರು ಒಪ್ಪಿ ಕಾರ್ಟ್ ಓಡಿಸುವ ಬಗ್ಗೆ ಮಾಹಿತಿ ನೀಡಿದರು. ಒಂದು ಸಾರಿ ನೋಡಿ ತಿಳಿದುಕೊಂಡ ಸಮರ್ಥ ಮೂರು ವರ್ಷ ಹತ್ತು ತಿಂಗಳಲ್ಲೇ ಗಾಲ್ಫ್ ಕಾರ್ಟ್ ವಾಹನ ಓಡಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದರು.
ತಾನೊಬ್ಬನೇ ಅಲ್ಲದೇ ತಂದೆ ವಿಜಯ್, ತಾಯಿ ಸುಶ್ಮಿತಾ, ಅಜ್ಜಿ ಕಮಲಾ ನಿರಾಣಿ ಸೇರಿದಂತೆ ಎಲ್ಲಾ ಕುಟುಂಬಸ್ಥರನ್ನು ಕೂರಿಸಿಕೊಂಡು ಗಾಲ್ಫ್ ಕಾರ್ಟ್ ಓಡಿಸಿದ ಸಮರ್ಥನ ಪ್ರತಿಭೆಯನ್ನು ನೋಡಿ ಮುರುಗೇಶ್ ನಿರಾಣಿ, ಅವರ ಮಗ ವಿಜಯ್ ಹಾಗೂ ಪತ್ನಿ ಸುಶ್ಮಿತಾ ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಗೆ ವಿಡಿಯೋ ಮಾಡಿ ಕಳುಹಿಸಿದ್ದರು.
ವಿಡಿಯೋ ಗಮನಿಸಿ ಮುಧೋಳ ನಗರಕ್ಕೆ ಬಂದ ಇಂಡಿಯಾ, ಏಷಿಯಾ ಬುಕ್ ಆಫ್ ರೆಕಾರ್ಡ್ ಜಡ್ಜ್‌ಗಳು ಸ್ಥಳದಲ್ಲಿ ಪರೀಕ್ಷೆ ಮಾಡಿದ್ದಾರೆ. ಬಾಲಕ ಸಮರ್ಥನ ಚಾಲನೆ ಕಂಡು ಇಂಡಿಯಾ ಬುಕ್ ಆಫ್ ರೆಕಾರ್ಡ್, ಏಷ್ಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಪದಕ ನೀಡಿ ಗೌರವಿಸಿದ್ದಾರೆ.
ಸಮರ್ಥ ಕೇವಲ ಎರಡು ವರ್ಷದವನಿದ್ದಾಗಲೂ 22 ಸಂಸ್ಕೃತ ಶ್ಲೋಕ ಹೇಳಿ ಸುದ್ದಿಯಾಗಿದ್ದ. ಲಿಮ್ಕಾ ಹಾಗೂ ಗಿನ್ನಿಸ್ ದಾಖಲೆಗೂ ಅರ್ಜಿ ಸಲ್ಲಿಸಿದ್ದು ಅಲ್ಲೂ ಕೂಡ ದಾಖಲೆ ಬರೆಯುತ್ತಾನೆ ಎಂಬ ವಿಶ್ವಾಸದಲ್ಲಿ ಸಮರ್ಥನ ಪೋಷಕರಿದ್ದಾರೆ.