Sun Nov 03 09:30:00 UTC 2024: ## ‘ಮಠ’ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ: ಮಾಳವಿಕಾ ಕಂಬನಿ ಮಿಡಿದು ಭಾವುಕರಾಗಿ ಮಾತನಾಡಿದರು
‘ಮಠ’ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿ ಸ್ಯಾಂಡಲ್‌ವುಡ್ ಕಂಬನಿ ಮಿಡಿದಿದೆ. ಇದೀಗ, ‘ಮನ್ವಂತರ’ ಧಾರಾವಾಹಿಯಲ್ಲಿ 20 ವರ್ಷಗಳ ಹಿಂದೆ ಗುರುಪ್ರಸಾದ್ ಜೊತೆ ಕೆಲಸ ಮಾಡಿದ್ದ ಹಿರಿಯ ನಟಿ ಮಾಳವಿಕಾ ಅವರು ‘ಪಬ್ಲಿಕ್ ಟಿವಿ’ ಜೊತೆ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
“ಏಕಾಂಗಿಯಾಗಿ ಬದುಕನ್ನು ಅಂತ್ಯಗೊಳಿಸಿಕೊಂಡಿರೋದು ಬೇಜಾರಿನ ಸಂಗತಿ. ಎಷ್ಟೋ ಜನರಿಗೆ ಅದೆಷ್ಟೋ ಕಷ್ಟಗಳು ಇರುತ್ತವೆ. ಕಲಾವಿದರು ಕೂಡ ಮನುಷ್ಯರೇ ತಾನೇ. ಎಲ್ಲರಿಗೂ ಬುದ್ಧಿವಾದ ಹೇಳುತ್ತಿದ್ದ ವ್ಯಕ್ತಿಯಾಗಿದ್ದರು. ಅವರು ತುಂಬಾ ಓದಿಕೊಂಡಿದ್ದರು. ಬಹಳ ಪ್ರತಿಭಾನ್ವಿತರಾಗಿದ್ದರು. ಹಾಗಿದ್ರೂ ಕೂಡ ಈ ರೀತಿಯ ನಿರ್ಣಯ ತೆಗೆದುಕೊಳ್ಳಬಾರದಿತ್ತು” ಎಂದು ಮಾಳವಿಕಾ ಅವರು ಆತಂಕ ವ್ಯಕ್ತಪಡಿಸಿದರು.
“ಮನ್ವಂತರ’ ಸೀರಿಯಲ್‌ಗೆ ಸಹಾಯಕ ನಿರ್ದೇಶಕರಾಗಿ ಗುರುಪ್ರಸಾದ್ ಕೆಲಸ ಶುರು ಮಾಡಿದರು. ಅವರು ಸೆಟ್‌ನಲ್ಲಿ ವಿಪರೀತ ಮಾತನಾಡೋರು. ಸದಾ ಉತ್ಸಾಹದಿಂದ ಓಡಾಡಿಕೊಂಡಿದ್ದರು. 20 ವರ್ಷಗಳ ಹಿಂದೆಯೇ ಅವರ ಬರವಣಿಗೆ ಚೆನ್ನಾಗಿತ್ತು. ಅಷ್ಟೆಲ್ಲಾ ತಿಳಿದುಕೊಂಡವರು ಹೀಗೆ ಮಾಡಿಕೊಂಡಿರೋದು ಸರಿಯಲ್ಲ. ಅವರ ಆತ್ಮಹತ್ಯೆಯ ನಿರ್ಧಾರವನ್ನು ಯಾಕೆ ಯಾರ ಕೈಯಿಂದಲೂ ತಪ್ಪಿಸೋಕೆ ಆಗಿಲ್ಲ ಅದೇ ಬೇಜಾರು. ಅವರಿಗೆ 52 ವರ್ಷ, ಸಾಯೋ ಅಂತಹ ವಯಸ್ಸೇ ಅಲ್ಲ. ಅದೆಷ್ಟು ಜನ ಬದುಕು ಕಟ್ಟಿಕೊಳ್ಳುತ್ತಿರುತ್ತಾರೆ. ಅವತ್ತು ಯಾರಾದರೂ ಅವರ ಮನೆಗೆ ಹೋಗಿ ಬಿಟ್ಟಿದ್ರೆ, ಕರೆ ಮಾಡಿದಿದ್ರೆ ಈ ಅನಾಹುತವನ್ನು ತಪ್ಪಿಸಬಹುದಿತ್ತು” ಎಂದು ಮಾಳವಿಕಾ ಅವರು ಭಾವುಕರಾಗಿದ್ದಾರೆ.
ಆತ್ಮಹತ್ಯೆಗೆ ಕಾರಣವಾಗಿರಬಹುದಾದ ಸಾಲದ ಹೊರೆ ಕುರಿತು ಮಾತನಾಡುತ್ತಾ, ಮಾಳವಿಕಾ ಅವರು, “ಆತ್ಮಹತ್ಯೆ ಮಾಡಿಕೊಳ್ಳೋದ್ದಕ್ಕೆ ಸಾಲದ ಹೊರೆ ಕೂಡ ಕಾರಣವಾಗಿರಬಹುದು. ಆದರೆ ಬದುಕಿಗಿಂತ ಯಾವ ಕಾರಣನೂ ದೊಡ್ಡದಲ್ಲ. ಸೋಲನ್ನು ಯಾರು ಅನುಭವಿಸಲ್ಲ? ಸೋಲು ಮತ್ತು ಗೆಲುವು ಜೀವನದ ಒಂದು ಭಾಗವಾಗಿದೆ. ಸೋತವರು ಮತ್ತೆ ಬಂದು ಗೆದ್ದಿದ್ದು ಇದೆ. ಯಾಕೆ ಹೀಗೆ ಮಾಡಿಕೊಂಡರು ಇದು ನಿಜಕ್ಕೂ ನೋವಿನ ಸಂಗತಿ” ಎಂದು ಹೇಳಿದರು.