Fri Nov 01 03:56:56 UTC 2024: ## ಕನ್ನಡ ರಾಜ್ಯೋತ್ಸವ: ಬೆಳಗಾವಿ, ಬೆಂಗಳೂರಿನಲ್ಲಿ ಅದ್ಧೂರಿ ಆಚರಣೆ
**ಬೆಳಗಾವಿ, ಬೆಂಗಳೂರು:** ಕರ್ನಾಟಕ ರಾಜ್ಯದ 69ನೇ ಕನ್ನಡ ರಾಜ್ಯೋತ್ಸವವನ್ನು ಇಂದು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಗಡಿ ನಾಡು ಬೆಳಗಾವಿಯಲ್ಲಿ ರಾಜ್ಯೋತ್ಸವಕ್ಕೆ ಮಧ್ಯರಾತ್ರಿಯೇ ಅದ್ಧೂರಿ ಚಾಲನೆ ನೀಡಲಾಯಿತು. ಚೆನ್ನಮ್ಮ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಯುವಕ- ಯುವತಿಯರು ಸೇರಿ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ, ಕೆಂಪು-ಹಳದಿ ಬಲೂನ್‌ಗಳನ್ನು ಆಕಾಶಕ್ಕೆ ತೇಲಿ ಬಿಟ್ಟರು. ಕನ್ನಡ ಹಾಡುಗಳಿಗೆ ಯುವಜನರು ಕುಣಿದು ಕುಪ್ಪಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರತ್ನ ದಿ. ಡಾ.ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ವಿಶೇಷ ಗೌರವ ಸಲ್ಲಿಸಲಾಯಿತು. “ಅಪ್ಪು ಅಗಲಿ ಮೂರು ವರ್ಷವಾದರೂ ನೀವು ಎಂದೆಂದೂ ಅಜರಾಮರಾ” ಎಂಬ ಸಂದೇಶ ಎಲ್ಲರ ಗಮನ ಸೆಳೆಯಿತು. ಕನ್ನಡಪರ ಹೋರಾಟಗಾರರು, ಸಂಘಟನೆಗಳು ಕೂಡ ಈ ಕಾರ್ಯಕ್ರಮಕ್ಕೆ ಸಾಥ್ ನೀಡಿದರು. ಚೆನ್ನಮ್ಮನ ವೃತ್ತದಲ್ಲೆಡೆ ಕನ್ನಡ ಧ್ವಜಗಳು ರಾರಾಜಿಸುತ್ತಿದ್ದವು. “ಕಲಿಯೋಕೆ ಕೋಟಿ ಭಾಷೆ… ಆಡೋಕೆ ಒಂದೇ ಭಾಷೆ” ಎಂದು ಎಲ್ಲರೂ ಜೋರಾಗಿ ಘೋಷಣೆ ಕೂಗುವ ಮೂಲಕ ಕನ್ನಡವನ್ನು ಮುಗಿಲೆತ್ತರಕ್ಕೆ ತಲುಪಿಸಿದರು.
ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿಯೂ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಐತಿಹಾಸಿಕ ಕಟ್ಟಡ, ಶಕ್ತಿಕೇಂದ್ರ ವಿಧಾನಸೌಧವನ್ನು ಕೆಂಪು, ಹಳದಿ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಕಟ್ಟಡದ ಸುತ್ತಲೂ ಕನ್ನಡದ ಬಾವುಟಗಳು ರಾರಾಜಿಸುತ್ತಿವೆ. ವಿಧಾನಸೌಧ ಅಷ್ಟೇ ಅಲ್ಲ, ಬಿಬಿಎಂಪಿ ಕಚೇರಿ ರೂಡ ಕೆಂಪು ಹಾಗೂ ಹಳದಿ ಬಣ್ಣ ಬೆಳಕಿನಲ್ಲಿ ಜಗಮಗಿಸುತ್ತಿದೆ.
ರಾಜ್ಯ ಸರ್ಕಾರ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲು ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಎಲ್ಲಾ ಸಂಸ್ಥೆಗಳಲ್ಲೂ ಈ ಭಾರಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಲು ಕರೆ ಕೊಡಲಾಗಿದೆ. ಆದರೆ ಯಾವುದೇ ಬಲವಂತ ಮಾಡಬಾರದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಕನ್ನಡ ಪರ ಸಂಘಟನೆಗಳಲ್ಲೂ ಮನವಿ ಮಾಡಿದ್ದಾರೆ.
ಬೆಂಗಳೂರು ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಇಂದು ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯಿಂದ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 9 ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರು ಕನ್ನಡ ಧ್ವಜಾರೋಹಣ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್, ಸಚಿವ ಮಧುಬಂಗಾರಪ್ಪ ಸೇರಿ ಹಲವರು ಭಾಗಿಯಾಗಲಿದ್ದಾರೆ.
“ಮಗಾಗಿ – ನಾಡಿಗಾಗಿ – ನಾಳೆಗಾಗಿ” ಎಂಬ ಧ್ಯೇಯದೊಂದಿದೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡಪರ ಸಮಾನ ಮನಸ್ಕರಿಂದ ಬೆಂಗಳೂರಿನಲ್ಲಿ ಇಂದು ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಎಂದು ಹೆಸರಾಗಿ 50 ವರ್ಷ ಆಗಿರುವ ಹಿನ್ನೆಲೆಯಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ಕನ್ನಡ ಪರ ಸಂಘಟನೆಗಳು ಈ ವಿಶೇಷ ಬೈಕ್ ರ‍್ಯಾಲಿ ಹಮ್ಮಿಕೊಂಡಿದೆ.